7.11.09
ಪ್ರಳಯಾತಂಕ...
ಮೊದಲೇ ಬದುಕಿ ಸತ್ತವರಿವರು
ಮತ್ತೇಕೆ ಸಾಯ ಬಡಿಯುತ್ತೀರಿ!
ಪ್ರಳಯಾತಂಕವೂ
ಮಾರಬಲ್ಲ ಸರಕೇ ಮಾಧ್ಯಮಕ್ಕೆ?
ಗ್ರಹ ಫಲಾಫಲಗಳೆಲ್ಲ ಲೆಕ್ಕಿಸೋ
ಉದ್ಧಾಮ ಪಂಡಿತರೆಲ್ಲದ್ದರೋ ಸುನಾಮಿಸುವಾಗ;
ಶಂಖದಮಲಲಿ ಗಾಂಢೀವಿ
ಪಾಂಚಜನ್ಯವ ಮರೆತು
ದೇವದತ್ತವ ಊದಿದರೆಲ್ಲಿ ಸದ್ದು?
ಪ್ರಳಯದ ಉಮೇದೂ ರೋಗವೇ
ಕಾಣಬಾರದ ಸುಖಃವೆಲ್ಲ ಹುಡುಕಾಟ
ಉಳಿದಾಯುಷ್ಯ ಲೋಲೂಪತೆಗೆ ಮೀಸಲೇ?
ಭಯಗ್ರಸ್ತ ಮಂದಿಗೇಂತ ಸಮೂಹ ಸನ್ನಿ
ಯಾರ ಅಂತ್ಯಕೆ ಯಾರ ಹುಸಿ ಚುಚ್ಚು ಮದ್ದು?
ಭೂಮಿ ಬಿರಿಯುವುದಿಲ್ಲ
ಕಾಲ ಸ್ಥಂಭಿಸುವುದಿಲ್ಲ
ಇದು ಬರಿ ತಲೆ ಕೆಟ್ಟವರ ಅಪಪ್ರಚಾರ!
ಕಲ್ಕಿಗಿನ್ನೂ ಕಾಲ ಕೂಡಿಬಂದಿಲ್ಲ
ಕುದುರೆ ಏರುವುದೂ ಹತ್ತಿರದಲಿಲ್ಲ...
ನೆರೆಗೂ ಬರಕೂ ಮಿಡಿಯಲಿ ಮನ
ಒಮ್ಮೆ ನೀರಿಗಾಹಾಕಾರ,
ಮತ್ತೆ ಕೊಚ್ಚಿ ಮುಳುಗಿಸೋ ವರ್ಷಧಾರೆ
ಕಂಗಾಲು ಜನಸ್ತೋಮ ಬರಿಗೈ ಈಗ;
ಎತ್ತೊಕೊಡಿ ನಿಮ್ಮ ತುತ್ತಿನ ಪಾಲ...
ಒಂದೊಮ್ಮೆ ಪ್ರಳಯವಾದರೆ ದಿಟವಾಗೂ
ದಕ್ಕೀತು ಒಳ್ಳೆ ಜನ್ಮ!
ಶೂನ್ಯ ಸೃಷ್ಠಿಗೆ ಕುಂಬಳವು ಸಿದ್ಧಿಸದು
ಉದುರ ಬಲ್ಲದು ಬರೀ ಬೂದಿ!
1.11.09
ಪೊಳ್ಳು ಪ್ರಭಾವಳಿ...
ಇದು ಸುಗ್ಗಿ ಕಾಲ
ಆಗಲಿ ಬಿಡಿ ನಿಮ್ಮದೇ ತಳಿ ಅಭಿವೃದ್ಧಿ...
ಜನ್ಮೇಪಿ ಮಂಗರು ನಾವು,
ಆಳಿಕೊಳ್ಳಿ; ರೂಡಿಯಾಗಿದೆ ನಮಗೆ,
ಬಗ್ಗಿ ನಡೆಯುವುದು, ತಗ್ಗಿ ಮಾತನಾಡುವುದು
ಓಟು ಗುದ್ದೀ ಗುದ್ದೀ ಪೆದ್ದರಾಗುವುದು ಹೀಗೆ,
ಬೆನ್ನು ಖಾಲೀ ಇದೆ ಕೆತ್ತಿಕೊಳ್ಳಿ ಶಿಲಾ ಶಾಸನ
ನಡೆಯಲಿ ಜನಾರ್ಧನ ಸೇವೆ...
ತಿಜೋರಿಗಳ ತುಂಬಿರಿ
ಬಂಗಲೆಗಳ ಎಬ್ಬಿಸಿರಿ
ಹೆಸರು ಉಳಿಯಲಿ ಆಚಂದ್ರಾರ್ಕ!
ಪುಟ್ಟ ನಾಗರ ಕಲ್ಲು ನೆಡುವಾಗ
ಫ್ಯಾನಿನ ಮೂರು ಅಲಗುಗಳ ತುಂಬ
ನೀರೇ ತುಂಬದ ತೊಟ್ಟಿಯ ಬದಿಗೆ
ಪಾಯಖಾನೆ ಸಂಡಾಸಿಗೆ
ಮಸಣದ ಕಲ್ಲುಗಳ ಮೇಲೂ
ಮಹಾಧಾನಿಗಳು ನಿಮ್ಮದೇ ಹೆಸರು...
ಹಳ್ಳಿ ಶಾಲೆಯ ಗೋಪಿ ಬಣ್ಣದ ಗೋಡೆ
ಸಂತಾನ ನಿಯಂತ್ರಣ ಪಾಠಕ್ಕೆ ತಕ್ಕ ಜಾಗ
ಊರಗಲ ಕೆಂಪು ತ್ರಿಕೋಣ ಬರೆದು ಬಿಡಿ...
ಜಾತ್ರೆ ತಳುಕಿಗೆ ತೂತು ಟಾರ್ಪಾಲಿನ
ಟೂರಿಂಗ್ ಟಾಕೀನಿಂತಹ ಮಂದಿ;
ಹಸಿವಿನಿಂದಲೇ ಸತ್ತ ಮುದುಕಿಯ
ದೊಡ್ಡ ಕಾರ್ಯಕೆ ತಿಂದುಕೊಳ್ಳಲಿ ಊರ ಜನ
ಮುದ್ದೆ ಮಾಂಸದೂಟ!
ಝಗಮಗಿಸೋ ರೇಷಿಮೆ ಪತ್ತಲಕೂ
ಹಿಂದೆ ಅಡಗಿದ್ದೀತು ಅದೇ ರೋಗಿಷ್ಠ ಮೀನಖಂಡ...
ಒಡ್ಡೋಲಗದ ತುಂಬ ಪಾನಮತ್ತ
ಭಟ್ಟಂಗಿಗಳದೇ ಬಹು ಪರಾಕು,
ಗುಧ ಸ್ಫೋಟವೂ ಆಹಾ ದಿವ್ಯ ಪರಿಮಳ!
ಹೊದ್ದದ್ದೇ ಕನಸುಗಳ ಹಚ್ಚಡ
ಗಟ್ಟಿ ನೆಲವೋ, ಹಾಸೆ ಪಲ್ಲಂಗ ಮೆತ್ತೆ
ಮಲಗಿದರಗಳಿಗೆ ಬೆವೆತ ಜೀವ
ಭೋರಿಡುವ ಗೊರಕೆ ಚಂಡ ಮದ್ದಲೆ!
ಮೀಸಲಿಟ್ಟ ಬೆಳಕಿನಾಟಕು ಒಲ್ಲೆ
ಹೊಗೆ ಕವಿದ ಬುಡ್ಡೀ ದೀಪಕೇ ತೃಪ್ತ...
ಬಂಜೆ ಮಣ್ಣೊಳು ಹೊಕ್ಕು ಮುಕ್ಕಿ
ನೆಲ ಫಲವತಾಗಿಸೋ ಎರೆಹುಳು;
ಧಮನಿಯೊಳು ನುಗ್ಗೋ ರುಜಿನಗಳ
ಕಾದು ಹೋರಾಡಿ ಮಡಿವ ಬಿಳಿ ರಕ್ತ ಕಣ,
ಹೀಗೆ ಹೆಸರಿಗಂಬಲಿಸದೇ ದುಡಿವ ಹತ್ತು ಹಲವು
ಶಾಲು ಸಂಭಾವನೆ ಸ್ಮಾರಕ ಒಂದೂ ಒಲ್ಲವು...
ಕಾಡಿಗೂ ಬೇಕಲ್ಲ ಹಬ್ಬಲು ಸಹಸ್ರಮಾನ
ಪೊಳ್ಳು ಪ್ರಭಾವಳಿಗೆಷ್ಟು ಕಾಲ ಮಾನ?
ಈಕ್ಲಿಪಸ್ ಮರ...
ಅಂಬರಕೆ ಚುಂಬನವೀಯುತಿದೆ
ಒಂದು ಈಕ್ಲಿಪಸ್ ಮರ...
ಪಾಪ! ಅದರ ಕರ್ಮ
ಎತ್ತರಕೆ ಏರಿದಷ್ಟೂ
ಅದಕೆ ಕೊಡಲಿ ಏಟಿನ
ರಭಸ ತೀವ್ರ
ಪಾತಿ ಮಾಡಲಿಲ್ಲ
ಕೊಡ ಕೊಡ ನೀರೆರೆದು
ನಿದ್ದೆಗೆಟ್ಟು ಚಪ್ಪರವೇರಲಿಲ್ಲ;
ನೆಲ ನಿಮ್ಮ ಹೆಸರಿಲ್ಲಿದ್ದರಾಯ್ತು
ಒಂದಡಿ ಗುಣಿ ಬಗೆದು
ಗಿಡವಿರಿಸಿ; ಮಣ್ಣು ಮುಚ್ಚಿ
ನೀರ ಚಿಮುಕಿಸಿದ್ದಷ್ಟೇ ನೆನಪು...
ಸುತ್ತಲೂ
ನೀರು ಸಾರಂಶ ಗೊಬ್ಬರ ಬಿಸಿಲು
ಹೀರಿ ಇಪ್ಪತ್ತಡಿ ಬೆಳೆದ
ಮರ - ಕಡಿಯಲಿಕ್ಕೇನಿದೆ ಹಕ್ಕು?
ಇದಷ್ಟೇ ಏಕೆ?
ಸ್ವಾಮಿ!
ಹಲವಿವೆ ಇಂತವೇ ಸ್ವಾರ್ಥಗಳು
ಸಾಮಾಜಿಕ ನೆರಳಲ್ಲೋ...
ಮಾಗರೀಕತೆಯ ತಳುಕಲ್ಲೋ...
ಧಾರ್ಮಿಕತೆಯ ಸೋಗಿನಲ್ಲೋ...
ನಿರಂತರ ಪಾಪ ಕರ್ಮಗಳು
ಮರ ಕಡಿದಷ್ಟು ಸಲೀಲಸಲ್ಲ
ಒಂದು ಮರ ಬೆಳೆಯಲು
31.10.09
ಕಾಮಧೇನು....
18.10.09
ರವಿ, ಭಾನು, ಸೂರ್ಯ ದೇವ...

ಆ ರವಿಯ ಬೆಳಕಿನಲೆ ಭೂಮಿಯ ಬದುಕು;
ಪಕ್ಷಕಲೆವಾತ್ಮ ತಿಂಗಳನ ಹೊಳಹು!
ಒಂದು ಪರಮಾತ್ಮ ಇನ್ನೊಂದು ಜೀವಾತ್ಮ
ಹುಟ್ಟಿನಿಂದೆರಡು ಸೌಮ್ಯ ಬಿಂದು...
ಎವೆಗೂ ನಿಲುಕದೀ ನಭೆಯು
ಶತ ಕೋಟಿ ತಾರೆಗಳ ಸಂತೆ;
ಹಾಳು ಸುರಿದಿದೆ ಬೆಳಕಿನೋಕುಳಿ
ನಡುವೆ ಏನೀ ಗಾಢಾಂಧಕಾರ?
ಏಳು ಕುದುರೆಗಳ ಮೇಲೆ ಸರದಾರ
ಮೂಡಣಕು ಪಡುವಣಕು ನಿಲ್ಲದವತಾರ!
ತಾನುರಿದು ತನ್ನೊಳಗೆ; ಧಗಧಗಿಸೋ
ಅಶಾಂತ ರುಧ್ರ ರೂಪಿ!
ಕ್ರಮಿಸಿ ಜಗದುದ್ದ ತನ್ನದೇ ಹಾದಿ
ತಣಿದು ತುಸು ತಾನಿಳಿದು ಧರೆಗೀವ ಮುತ್ತು!
ಹಸಿದ ಜೀವ ಜಾಲಕೆ ಅನ್ನವನು ಬಸಿದು
ಉಸಿರುಣಿಸಿ ಗುಕ್ಕು ಗುಕ್ಕು...
ಇವನಲ್ಲವೇ ನಿಜಕೂ ದೇವ ದೇವ?
ಕರ್ಣಧಾತುವಿನ ಕರುಣೆ ಮರೆವುದುಂಟೇನು?
ಕಪ್ಪುರಂಧ್ರವು ಬಾರದಿರಲಿನ್ನೆಂದೂ
ಭುವಿಯತ್ತ ಚುಂಬನವು ಸಾಗುತಿರಲೆಂದೂ...
17.10.09
ಉಪನಯನ

ಅವಳೂ ಬಂದಿದ್ದಳು
ನನ್ನ ಉಪನಯನಕ್ಕೆ
ಕಂಕುಳಲ್ಲಿ ವರ್ಷಾರ್ದದ ಮಗು
ಬದಲಾಗಿದ್ದಾಳೆನಿಸಿತ್ತು
ಮೊದಲಿಗಿಂತಲೂ ಮೈದುಂಬಿಕೊಂಡಿದ್ದಳು
ಕಂಗಳಲ್ಲಿ ಅದೇ ಮಾದಕತೆ
ಎಷ್ಟು ವರ್ಷಗಳಾಗಿತ್ತು
ಇವಳನ್ನ ಹತ್ತಿರದಿಂದ ನೋಡಿ...
ಅವಳು ಹಳದೀ ಸೀರೆಯಲ್ಲಿದ್ದಳು
ಪತಿರಾಯ ಕುಸುರಿಯ ಹಳದೀ ಜುಬ್ಬ
ಮಗುವಿಗೆ ಹಳದೀ ಸ್ವೆಟರ್ರು
ನಾನೂ... ಹಳದೀ ಮಯನಾಗಿದ್ದೆ...
ಜನಿವಾರ, ದಟ್ಟಿ, ಅಂಗವಸ್ತ್ರ
ಇಂತದೇ ಹಳದೀ ಚೂಡಿಯಲ್ಲಿ
ಮದರಾಸ ಧಗೆ ದಿನಗಳಲ್ಲಿ
ಕ್ರೆಸೆಂಟ್ ಪಾರ್ಕಿನ
ಗುಲ್ಮೋಹರದಡಿಯಲ್ಲಿ
ಪ್ರೀತಿ ಕಿಚ್ಚು ಹಚ್ಚಿದವಳು
ಭಲೇ ಕಲಾವಿದೆ!
ಹಳತನ್ನ ಮರೆತಂತೆ
ದಿವ್ಯ ನಟನೆ...
ನನ್ನ ಕಣ್ಣಾಲಿಯಲ್ಲಿ ನೀರ ಪೊರೆ...
ಮಿರ್ಜಾ ಗಾಲೀಬನದೊಂದು ಗಜಲು...

(ಇಂಗ್ಲೀಷ್ ಅವತರಣಿಕೆಯಿಂದ)
(ಭಾವಾನುವಾದದ ಪ್ರಯತ್ನ)
ನನ್ನೊಳಗೆ ತುಂಬಿರುವ ತೀರದಾಸೆಗಳ
ಖಾತೆ ಕರಗಲು ಬೇಕು ಮರು ಜನ್ಮ
ಗಿಟ್ಟಿದ್ದು ಗುಲಗಂಜಿ; ನೆನೆದದ್ದು ಆಕಾಶ
ದಕ್ಕಬಲ್ಲವೇ ಹೇಳಿ ಈ ಜನ್ಮದಲ್ಲಿ?
ನಿಮಗೂ ಗೊತ್ತಿದೆ ಈಗ ಆದೆಮ್ ಸ್ವರ್ಗವಾಸಿ
ಭೋರಿಟ್ಟು ಅತ್ತರಂತೆ ಈಡನ್ ಬಿಡುವಾಗ
ದೋಸ್ತ! ನಾನೂ ಹೊರಟು ಬಂದವನೇ ನಿಮ್ಮಿಂದ
ಪೀಡೆ ಕಳೆಯಿತೆಂಬಂತೆ ಕುಣಿದಾಡಿದಿರಂತೆ!
ಆಗೆಲ್ಲ ಕುಡಿತವೆಂದೆ ಗಾಲಿಬ್;
ಗಾಲಿಬ್ ಎಂದರೆ ಕುಡಿತ
ಹಾಗಿತು ನೋಡಿ ನನ್ನ ಜಮಾನಾ
ಮತ್ತೊಂದು ಶಕೆ ಬಂದಂತಿದೆ, ನೋಡಬೇಕು
ಜಂಶೇಡನ ಬಟ್ಟಲಿನಲ್ಲಿ ಕಾಣುವುದು ಏನೋ?
ಅರೆ ಭಾಯಿ ಸಾಹೇಬ! ನಾನು ಕೇಳಿದ್ದಾದರೂ ಏನು
ನನ್ನ ಸೋಲಿಗೆ ನಿನ್ನ ಸಮಾಧಾನ
ಹೇಗೆ ಅರೆತೇನು ನೀನು ಗದ್ಧಾರ್ ಮಗನೆಂದು
ಕಾದು ಇಕ್ಕುತ್ತೀಯಂತ ಬೆನ್ಗೆ ಚೂರಿ
ಓ! ಪ್ರವಾದಿಯೇ, ಅಲ್ಲಾಹುವಿನಾಣೆ
ಸರಿಸದಿರು ನೀನು ಖ್ವಾಬಾದ ಹೊದಿಕೆ
ಗಾಲಿಬ್! ನಿನ್ನ ಗ್ರಹಚಾರದ ಹಣೆ ಬರಹಕ್ಕೆ
ಅಲ್ಲಿ ಕಲ್ಲು ದೇವರು ನಿಂತು ಗಹ ಗಹಿಸಿ ನಕ್ಕೀತು...
(ಹಾಯ್ ಬೆಂಗಳೂರ್! ವಾರ ಪತ್ರಿಕೆ
ಸಂಪುಟ: ೭, ಸಂಚಿಕೆ: ೯, ಸೃಷ್ಠಿ: ೩೨೧
ನವೆಂಬರ್ ೨೩, ೨೦೦೧ ರಲ್ಲಿ ಪ್ರಕಟಿತ)
___________________________
ಜಂಶೇಡ: ಪರ್ಷಿಯನ್ ದೊರೆ, ಇವನ ಬಳಿ ಇದ್ದ
ಮಾಯಾ ಬಟ್ಟಲಿನಲ್ಲಿ ಭೂತ, ಭವಿಷ್ಯತ್ ಮತ್ತು ವರ್ತಮಾನ
ಕಾಲಗಳು ಕಾಣುತ್ತಿದ್ದವೆಂಬ ನಂಬಿಕೆ
ಗುರುತ್ವಾಕರ್ಷಣೆ

ನಿಮ್ಮ ತಾಕಿದೀ ತಾಕು
ತಲುಪಿಸಿ ಬಿಡಿ ನನ್ನ ಗುರುವು ತನಕ;
ಏಕೆಂದರೀಗೀಗ ನನ್ನ ಕೂಗಿಗೂ
ನಿಲುಕದೆತ್ತರ ಅವರ ರೂಪು...
ದನಿ ಚಹರೆ ಬರವಣಿಗೆ; ನನ್ನೆಡೆಗೆ
ಅಕ್ಷರದ ಅಚ್ಚರಿಯ ಗುರುತ್ವಾಕರ್ಷಣೆ,
ತಿಳಿಸಿ ಬಿಡಿ ಇನ್ನೂ ಈ ತುದಿಯಲುಳಿದಿದೆ
ಮಿಡಿವುದದೇ ಹಚ್ಚ ಹಳೇ ಪ್ರೀತಿ
ತಲುಪಿಸಿ ಬಿಡಿ ಇನ್ನೂ ಉಸಿರಾಡೋ
ಈ ಭಕ್ತನಲ್ಲಿರೋ ಅಮಾಯಕ ಭಾವ,
ತಳ್ಳಿದಷ್ಟೂ ಮತ್ತೂ ಹತ್ತಿರವಾಗೋ
ಹುಚ್ಚುತನ ಕಾವಲು ಸ್ವಭಾವ!
ಅಂದೆಲ್ಲ ಗುಡಿಗೇರೋ
ಮೆಟ್ಟಿಲಷ್ಟೇ ದೂರ ಗರ್ಭ ಗುಡಿ
ಒಳಗಣ ದೇವರೂ ಉಸಿರಂತರ...
ಇಂದದೇ ಹಿಮಗಿರಿಗೂ
ಮೇಲು ಶಿಖರಾಗ್ರ ಅದರ ತುದಿ
ಸೂಜಿ ಮೊನೆ, ನಿಲ್ಲ ಬಲ್ಲಿನೇ ಹೇಳಿ?
ಗುರುವಿನ ಒಡನಾಡಿ ನೀವು!
ಸಿಕ್ಕಾಗಲೊಮ್ಮೆ ಹೇಳಿ ನೋಡಿ;
ಮರೆವು ಮೀರಿದ ಗುರುವು
ಮುನಿಯಬಾರದು ಹೀಗೆಲ್ಲ ಅಂತ...
ಬೆಳಕ ಕೊಡುವವರೇ ಬೆನ್ನ ತಿರುವಿದರೇ
ಶಾಪಗ್ರಸ್ತ ಸೂರ್ಯ ಪಾನರು ನಾವು,
ಏನು ಮಾಡಬೇಕು?
28.9.09
ಮಸಣವೂ ಸಾಯುವಂತಿದ್ದರೇ...

ಸುಡಲಿಕ್ಕಿಷ್ಟು ಹೂಳಲಿಕ್ಕಿಷ್ಟು
ಪೆಟ್ಟಿಗೆಗೆ ಮತ್ತಷ್ಟು
ಸಂಸ್ಕಾರ ಖರ್ಚು ಬಾಬಿಗೆ
ಗತಿ ವಿಶ್ವ ಬ್ಯಾಂಕಿನ ಸಾಲ!
ಅಸ್ಥಿ ಪಂಜರದ ಕೆಳಗೂ
ಎಂದೋ ಸತ್ತವನದೊಂದು
ಕರಗಲಾರದ ಮೂಳೆ ರಾಶಿ
ಅಚ್ಚ ಹೊಸ ಹೆಣ ಭಾರಕೆ
ಕುಸಿವ ಕೆಳಗಣ ಸೀನಿಯಾರಿಟಿ...
ಮಸಣವಾದರೂ ಏಕೆ
ಹಾಳು ಸುರಿಯಬೇಕು, ಹೇಳಿ?
ವಿಲಾಯಿತಿಯಲ್ಲೊಮ್ಮೆ ನೋಡಿ ಬನ್ನಿ
ಸತ್ತರಲ್ಲೇ ಮಣ್ಣಾಗುವಂಥ
ಸುಂದರ ಸಮಾಧಿ ಸಾಲು!
ಚಕ್ರೀಕರಣಗೊಳ್ಳುವಂತೆ,
ಏಕೆ ನೆಡಬಾರದು ಗಿಡವೊದಲ್ಲಿ?
ಅರಳಲಿ ತಾನೇ ತಾನಾಗಿ ಉರುಳಲಿ
ಸತ್ತವರ ಮಜ್ಜೆ ಗೊಬ್ಬರ ಮೆಂದು
ದಾಸವಾಳವೋ ಜಾಜಿಯೋ ಅಲ್ಲಿ...
ಶಹರ ಪುರಾಣ...

ಶಹರುಗಳ ತುಂಬೆಲ್ಲಾ
ಕಸಾಯಿಖಾನೆಗಳೇ;
ರಕ್ತ ಪೀಪಾಸೀ ನರಮೇಧಗಳೇ
ವಿವಿಧಾವತಾರಗಳಲಿ...
ಕಾಲು ಮಧ್ಯಾದಿ
ಸಾವಿರ ಸಾವಿರ ಬಿಪೀಓಗಳು
ಖಾದಿಗೆ ಅಮೇಧ್ಯದಸಿವು
ಹಾಸಿ ತಿವಾಸು ತಂದ ಕಂಪನಿಗಳು;
ತೆರಿಗೆ ರಜೆ, ಧರ್ಮಕ್ಕೆ ನೆಲ
ಮೇಲೆ ಬಿಟ್ಟೀ ಕರೆಂಟು, .೧೦
ಕನ್ನಡಿಗನೇ ಅಲ್ಲಿ ಅಲ್ಪಸಂಖ್ಯಾತ!
ಇಲ್ಲದೆಲ್ಲಕೆ ಬೊಬ್ಬಿಡುವ ಗುತ್ತಿಗೆಯಂತಾಡುವವರು
ಇಂತಿಷ್ಟು ಇರಬಹುದೆ ಫಲಾನುಭವಿಗಳು,
ಏನಿವರ ಪಗಾರದಹಂಕಾರ
ಸಡು ಬೀದಿಯಲೇ ಕುತ್ತಿಗೆಗೆ
ಗುರುತು ಚೀಟಿಯ ಸರಪಳಿ, ಮಲಗುವಾಗಲೂ ಬಿಚ್ಚಲೊಲ್ಲ!
ಲಘು ಗಣಕಿಗಳ ದೆಸೆಗೆ
ಬಾಡಿಗೆ ಮನೆ ಮಾಲಿಕರದೇನು ನಸೀಬು
ಅವರಿಗೋ ಇದು ಲಾಟರಿಗೆ ಗೆದ್ದ ಬಹುಮಾನ!
ವತೃಲ್ಲ ರಸ್ತೆ ಇಕ್ಕೆಲದಲ್ಲೂ .೨೦
ಇರುಳು ಕುಟ್ಟುವ ಕೀಲಿ ಮಣೇಗಳದೇ ರಾಜ್ಯಭಾರ...
ನಡು ರಾತ್ರಿ ಪಿಕ್ಕಪ್ಪಿಗೆ ಕಾದ
ನರಕದಿಂದೊರಟ ಕಾರು ಸಂತೆ
ಆತ್ಮಕ್ಕೆ ಟಕೀಲಾ ಗುಂಡು..
ಅದೇ ದಾರಿಯಗುಂಟ
ಸಪ್ತ ಸಾಗರಾಚೆಯಿಂದೆಲ್ಲ
ನೆರೆವ ಹಕ್ಕಿಗಳ ಕಲವರವ ಹೊರುವ
ಗತ ಪಕ್ಷಿಧಾಮದ್ದೋಂದು ಕೆರೆ
ಈಗ ಉಳಿದಿದ್ದೇನಲ್ಲಿ ಕಾರ್ಖಾನೆ
ರಸಾಯನಿಕಳದೇ ವಿಸರ್ಜನ್ .೩೦
ಮಳೆಗಾಲಕೆ ನೋಡಬೇಕಿದೆ
ನೊರೆ ಬೆಟ್ಟ ನೆರೆ ಬಂದ ಮಲಿನ ರಾಶಿ!
ಸುತ್ತೂ ವಿಶಾಲ ಭಾರತ
ಫಳಫಳಿಸಿ ಬೆಳಗುತಿದೆಯಂತೆ
ಎಲ್ಲಿ? ಮುಚ್ಚಿದಾ ಎವೆಯೊಳಗೆ?
ವಿಧಾನ, ವಿಕಾಸ್ದ, ನಿಧಾನಸೌಧಾದಿ
ಬಿಳಿ ಆನೆ ನಿದ್ರಿಸುವಾಗ!
ಸರ್ಕಾರಿ ಧಪ್ತರಿನ
ಹೆಗ್ಗಣಗಳಿಗೆ ಇಲಿಗಳ ಕಾಟ!
ಪಾಷಾಣ, ಬೋನಾದಿ ನಿಶೆರಾತ್ರಿ .೪೦
ವಿದ್ಯೆಗಳೆಲ್ಲ ವ್ಯರ್ಥ ಯತ್ನ
ಉಳಿವುದೊಂದೇ ಪ್ರಯತ್ನ
ಫೈಲುಗಳೊಟ್ಟಿ ಇಡಿ ಬೆಂಕಿ...
ಹೊರಗೆ ಬೀದಿಯಲೊಂದು
ಪುಷ್ಠವಾಲಿದ ಬಸುರಿ ಪಯಣ
ಹಿಂದೆಯೇ ವ್ಯಂಗ್ಯದುಬ್ಬರಕ್ಕೆ
ನಕ್ಕ ಖಾಲೀ ಸುವರ್ಣಾ ಬಸ್ಸು!
ಕೂಡ ವೋಲ್ವಾ ಸಾಲು ಸಾಲು...
ಕೆರೆ ಬತ್ತಿ, ಮಸಣಾದಿ ಜೇಸೀಬಿಸಿ
ನೆಲಮಟ್ಟ ಸಮತಟ್ಟು ಸಮಾಜವಾದ .೫೦
ಎಲ್ಲಿದಕ್ಕಿದರಲ್ಲಿ ಅಂಬರಕೆ
ಚುಂಬಿಪ ಫ್ಲಾಟುಗಳದೇ ಏರು
ಬುಡಸೌಚಕ್ಕೆ ದಢೂತಿ ಮೈ ಉಜ್ಜಲು ನೀರು,
ಅದರ ಬಸಿದಿಂದಿಳಿವ
ಸುನಾಮಿ ಬೈಕು ಕಾರುಗಳ ಪ್ರವಾಹ
ಇಕ್ಕಟ್ಟಲ್ಲಿ ನಮ್ಮ ಗಾಡಿ, ಆಮೆಯೂ ನಾಚೀತು
ನಮ್ಮ ಯಮ ಸ್ಪೀಡಿಗೆ; ಆಹಾ...
ಮುಕ್ಕಲು ಮೈಲಿಗೆ
ತೆವಳಿ ತೆವಳಿ ಮೂರುಗಂಟೆ
ಇನ್ನೆಲ್ಲೋ ಹೊಗೆ ಕುಕ್ಕೋ ಚಿಮಣಿಯಡಿ .೬೦
ಕಾರ್ಖಾನೆಗಳ ಆವರ್ತದುಸಿರು
ನೂರು ಕೈಗಳು ದುಡಿವ ಸಮಕೊಂದು
ಯಂತ್ರ ಕೈಯಿ
ಲಿಂಗ ಬೇಧಗಳಿಲ್ಲ, ಸಂಬಳದಂಗಿಲ್ಲ
ಪಿಂಚಣಿಯ ಮಾತಿಲ್ಲ, ಹಬ್ಬಕ್ಕೇನೂ ಕೇಳಲಿಲ್ಲ
ತುಟಿಭತ್ಯೇ ಬಗ್ಗೆ ತುಟಿ ಬಿಚ್ಚಲಿಲ್ಲ;
ಬಾಯಿ ಹೊಲಿದ ಮೆದುಳಿರದ
ಯಂತ್ರ ಮಾನವರು...
ಶಹರಗಳೆಲ್ಲ ಸಾಯುತಿವೆ
ಸಾಹುಕಾರರ ತಿಜೋರಿಗಳಲ್ಲಿ... .೭೦
galore
23.9.09
ಧಾಮದ ಹಂಗು...

ಕಾಗದವೂ ಬರೆಯಲಿಲ್ಲ
ತಂತಿ ಸಂದೇಶ ರಗಳೆಯಿಲ್ಲ;
ಖಂಡಾಂತರ ಹಕ್ಕಿಗೆ
ಮರಳುವಾಗಲೂ ಕೈ ಬೀಸೋ
ವಾಂಛೆ ಅಂಟು ಚಪಲ ದಾಖಲಾತಿಗಳಿಲ್ಲ
ಮೆದುಳೂ ಒಂದು ದಿಕ್ಸೂಚಿ
ದಿಕು ತಪ್ಪದ ಪಯಣ
ಅಲ್ಲಿಇಲ್ಲಿ ವಿಳಾಸ ಕೇಳಿ
ಹಾದಿ ತಪ್ಪುವ ಮಾತೆನ್ನಿಲ್ಲಿ?
ಧಾಮಕ್ಕಿಳಿವ ಕರಾರುವಾಕ್ಕು ಪ್ರಙ್ಞೆ
ಯಾವ ರಡಾರು ಪ್ರಶ್ನಿಸಲಿಲ್ಲ
ರಹದಾರಿ ಪತ್ರ ಕೇಳಿದವರಿಲ್ಲ
ಗಡಿ ಭಾಷೆ ವೀಸಾ ಬೇಲಿಗಳಿಲ್ಲ
ಇಳಿವ ಸುಂಕ, ಸ್ಥಳೀಯ ತೆರಿಗೆಗಳಿಲ್ಲ
ಮುಂಗಡ ಕಾಯ್ದಿರಿಸಿ ಇಳಿಯಲಿಲ್ಲ...
ಅಲ್ಲಲ್ಲೇ ಸ್ವಯಂವರ;
ಮಿಲನೋತ್ಸವ, ಹಾಗೆ ಸುಖಃ ಪ್ರಸವ.
ಗೂಡ ಮೆತ್ತೆಯಲ್ಲಿ ಕಾವಿಗೆ ಕೂತ ಹಕ್ಕಿ
ಚಿವ್‍ಗುಡುವ ಮರಿ; ಅದರೂಟ ಇದಕೊಲ್ಲ
ಖುರ್ಚಿ ಎದ್ದೊಡೆ
ಕಾದು ಅಂಡೂರಲಿಲ್ಲ!
ಅದರದೇ ವ್ಯಾಪ್ತಿ.. ದಕ್ಕಷ್ಟೇ ಪ್ರಾಪ್ತಿ...
ಅವಧಿ ಮುಗಿದ ಕರಾರಿನಂತೆ...
ತೀರಾ ನಮ್ಮ ನಿಮ್ಮಂತೆ
ಹಿಂದಿರುಗಲವೇನು ತಕರಾರು ತೆಗೆದಾವೆ?
ಹಕ್ಕಿಗೆಂಥಾ
ನೆಲದ ಹಂಗು?
ಕಿಟಕಿಯಾಚೆಯ ಮಳೆ...

ಇರುಳೆಲ್ಲ ಸುರಿದ ಮಳೆಗೆ
ಇವಳ ನರ ನಾಡಿಗಳೆಲ್ಲ
ಮುದ್ದೆ ಮುದ್ದೆ...
ಕತ್ತಲು ಮನೆಯೊಳಗೆ
ಕಿಟಕಿಯಾಚೆ ಸುರಿವ
ಬೇಡದ ಮಳೆ!
ಖಾಲಿ ಅಂತರಂಗಕೂ
ಕವಿದಿದೆ ಏನೋ ಮಂಕು;
ನೀರೇ ಇಂಗಿದ ಕಡಲಿಗೂ
ಉಕ್ಕು ಭರತದ ಚಪಲ
ಬಿರುದುಬ್ಬಿ ಹರಿದಿದೆ ವ್ಯಥೆ
ನಡುವಿದೋ ದಿಕ್ಕು ತಪ್ಪಿದೀ
ಹರಕಲು ತೆಪ್ಪ,
ಇದೂ...ನೆಮ್ಮದಿಯ ಪಯಣ?
ಒರೆಗೂ ಮರುಳು...
ತಿಕಿದಾಪರಂಜಿ ಬದಲಿಗೆ
ತುಕ್ಕಿನೆಂಥದೋ ಲೋಹ;
ಭ್ರಾಂತ ಅಣುವಿಗೂ ತನದೇ ತೂಕ
ಇದು ಮಳಲ ಮೇಲಿನ
ಕಗದ ದೋಣಿ,
ಯವ್ಯಾವುದೋ ಗಾಳಿಗಳ ತಿವಿತ
ತೇಲು ಎಂದರೆ ನಕೀತು ಸುಮ್ಮನೆ!
ಜಂಕು ಗಟ್ಟಿದ ನೆನಪುಗಳ
ರೀಲು...
ಕಿಟಕಿಯಚೆಯ ಮಳೆಗೂ
ಎಲ್ಲಿ ಕೊನೆ ಮೊದಲು?
ಕವಿತೆ ಎಂದರೆ ಗೆಳೆಯ...

ಕವಿತೆ ಎಂದರೆ ಗೆಳೆಯ
ಅದು ಉದಯ ರವಿ ಚುಂಬನಕೆ
ಫಳಫಳಿಸೋ ಇಬ್ಬನಿಯ ಬಿಂದು
ಎದೆಗೆ ನಸು ಕಂಪನವೀಯೋ
ನಲ್ಲೆ ಇರುವನು ಘೋಷಿಸುವ
ದುಂಡು ಮಲ್ಲಿಗೆಯ ಕಂಪು...
ಅದು,
ಹೂವು ತಕಿದ ಮೇಲೂ
ಹೊತ್ತು ಕಳೆದರೂ ಉಳಿವ ಪರಗ ರೇಣು,
ಎಳವೆಯಲ್ಲಿ ಎಂದೋ ಕಟ್ಟಿಟು
ಮರೆತರೀಗೂ ಗಾಳಿಗೆ ತೂಗೋ ಹಗ್ಗದುಯ್ಯಾಲೆ,
ಸತ್ತ ಪಿನಕಿನಿಯೊಡಲ
ಬಗೆದಗಲೊಮ್ಮೆ ಪುಟಿವ ಊಟೆ,
ಕರೆವೋಲೆ ಸಂದಂತೆ
ಸಪ್ತ ಸಗರ ದಾಟೋ ಪುಟ್ಟ ಹಕ್ಕಿ,
ಹಾಲು ಗೆನ್ನೆಯ ಮಗುವು
ಯಾವ ಕನಸಿಗೋ ತೊಟ್ಟಿಲಲಿ ನಗುವ ನಗು,
ಯರ ಹಂಗಿಗೂ ಸಿಗದ
ನೀಲಾಗಸದ ತುಂಬೆಲ್ಲ ಮೋಡಗಳ ಚಿತ್ತಾರ...
ಅದು
ಬರಿದೇ ಸಾಲುಗಳಾಚೆ, ಹೊಳೆವ
ಅಕ್ಕರದ ಅಚ್ಚರಿಯ ಮಾಯಾ ಹಾದಿ
ತನ್ನರಿವಿನೆತ್ತರಕೂ ಜ್ವಲಿಪ ದಾರಿ ದೀಪ...
ಕವಿತೆ ಎಂದರೆ ಗೆಳೆಯ!
ನನ್ನ ಕಲ್ಪನೆಗಳೇ ಹಾಗೆ,
ದ್ವೀಪದಿಂದೆತ್ತಿ ದಡ ಸೇರಿಸುವ
ನೆನೆದಾಗ ಬರುವ ಅಪ್ತ ಮಿತ್ರ...
14.6.09
ಬಂಕರುಗಳಾಚೆಯೂ ಬದುಕಿದೆ!
15.12.08
ಛಾವಣಿಯ ಬಾವಲಿ

೧
ಸವರು ಕಾಡನು, ಎತ್ತಿಕೋ ಕೋವಿ
ಇಟ್ಟಾಡಿಸಿ ಸುಡು
ತೆವಳಲಿ, ಈಜಲಿ, ಹಾರಲಿ, ಓಡಲಿ;
ಬಿಟ್ಟೀಯ! ಬಲು ತೀಕ್ಷ್ಣ ನಿನ್ನ ಜಠರ ರಸ,
ಪರೀಕ್ಷೆಯಾಗಲಿ ಶಭ್ಧವೇದಿಯ ಗುರಿ
ಬೀಗು ಹೆಡೆಗೇರಿಸಿ ಸಪ್ತವರ್ಣದ ಗರಿ!
೨
ಗವಿ ಕತ್ತಲ ಛಾವಣಿಗೆ ಕುರುಡು ಬಾವಲಿ;
ಹಿಕ್ಕೆ ಮೆಲ್ಲಲು ಕಾದ ಕ್ಷುಧ್ರ ತಳಪಾಯದಲ್ಲಿ,
ಬಿಲವೋ, ಪೊಟರೆಯೋ ಅಲ್ಲೇ ಸಂತಾನವಲ್ಲಿ!
ನೂರು ದೈವಕೂ ಭಿನ್ನ ತಿನ್ನುವಾಹಾರ
ಕೆಲವು ಶಾಖಾಹಾರ, ಕೆಲವು ಮಾಂಸಾಹಾರ...
೩
ಹನಿ ರಕ್ತದೊಳಗೂ ಕಣದ ಗಣ
ಸಹಸ್ರ ನರವ್ಯೂಹ ಜೀನನು ಹಿಡಿದು
ದೇಹಶಾಸ್ತ್ರವ ಶಾಸಿಸುವ ಮಿದುಳು;
ಒಳಗಂಗಾಂಗ ತುಡಿತವನೇ
ನಿರ್ಧರಿಸಲಾರದ ನರಾಧಮ!
ಭೂಮ್ಯಾಕಾಶ ವಸಾಹತು ಬೇಕು...
೪
ಉರಿವಾಗ್ನಿ ಆರಿದರೆ ಅಂಗಳದಿ ಶವ
ಕಣ್ಣೋ, ದೇಹವೋ ದಾನಕ್ಕೆ ಯೋಗ್ಯ
ಆಹಾ ಪುರುಷಾಹಾಂಕಾರ! ಅದು ವರ್ಜ್ಯ;
ಸೀಳು ಎದೆ ಕತ್ತರಿಸಿ ತೆಗೆ ಪೇಸುಮೇಕರ್ರು
ಕಲ್ಲಿರುವ ತಾವಲ್ಲಿ ಸತ್ತ ಹೃದಯ...
೫
ಮನಸ ಮಸೂರದ ಸುತ್ತ
ಕೈಯಾರೆ ಪೊರೆ ಹೆಣೆದೆ ಬುದ್ಧಿಗೇಡಿ;
ಇಲ್ಲದೆಡೆ ಕೆದುಕುತ್ತ ಇಲ್ಲದಾ ಸುಖಃ
ಪರ ಸಂತಸಕೆ ದಿನವೆಲ್ಲ ಕೊರಗಿ ಕೊರಗಿ
ಗೀರು ಕಡ್ಡಿ! ನೆರೆ ಮನೆ ಸುಡುವಾಗ ವಿಕಟಹಾಸ
ಬೂದಿಯಾಗದೇ ಜೊತೆಗೆ ನಿನ್ನದೇ ಮನೆ?
೧೫.೧೨.೨೦೦೮
6.12.08
ನದಿಯ ಸ್ವ"ಗತ"


ಬೀಸಿದ ಬಲೆಗಳಿಗೆಲ್ಲ ಇಲ್ಲವೆನ್ನಲಿಲ್ಲ
ರಾಶಿಯಲಿ ಮತ್ಸ್ಯಜಾಲ
ಆಣೆಕಟ್ಟು ಎಬ್ಬಿಸಿ ತೂಬರೆತೆರೆದರೆ
ನಾಡೆಲ್ಲ ನಾಲಾಜಾಲ
ತೊರೆ, ಜರಿ, ಉಪನದಿ ಹೊಳೆಗೂ
ಸಂಗಮ ಯೋಗ
ಮಲೆ ಹಾಯ್ದು ಹಾರಿ ಜಿಗಿದರೆ
ವಿಹಂಗಮ ಜೋಗ
ನೀವು ಸಾಗರಗಳೂ ಕನಿಕರಿಸಬೇಕು
ನದಿ ಪ್ರೀತಿ ನಿಮ್ಮ ತಾಕಬೇಕು
ನಿಮ್ಮದೇ ನೀರು ಬಿಸಿಲಿಗಾವಿಯಾಗಿ
ಮಳೆಗೆರೆದರೆ ಪಾತ್ರಕ್ಕೆ ನೀರು
ಅರ್ಕಾವತಿ, ವೃಷಭಾವತಿ, ಪಿನಾಕಿನಿ
ಯಾರ ತಪ್ಪಿಗೆ ಇಂಥ ತಲೆದಂಡ?
ಬತ್ತ ಗಂಗೆಯ ಒಡಲ ಮರಳ
ಬಗೆದಿರಿ ಇಂಗಲಾರದಿನ್ನು ನೀರು
ಮಳೆಗಾಲ ನೆರೆ ಹರಿದು
ಬೇಸಿಗೆಗೆ ತೊರೆ ಹರಿದು
ಜೀವ ಜಾಲಕೆ ಉಣಿಸಿ ಉಸಿರು
ಕಡೆಗೆ ಸಾಗರದಲೇ ಐಕ್ಯ
ನೆನಪ ಪಳಿಯುಳಿಕೆ

ನೆನಪ ಪಳಿಯುಳಿಕೆಯಲಿ
ಅವಳ ಹೆಜ್ಜೆಯ ಅಚ್ಚು
ತಾಕಿದಾಗಲೆಲ್ಲ ನನಗೆ ಪುಳಕ
ನೆಲ ಮೋಡ ಸರಸಕೆ
ಎದೆ ಗದ್ದೆ ಬೈಲು ಒದ್ದೆ ಒದ್ದೆ
ನೆಂದಾಳೋ, ನೆಗಡಿಯೋ! ಅಳುಕು
ಹಳ್ಳಿ ದಾರಿಯಲಿ ನೆರಿಗೆ ಲಂಗವ
ಒದೆದು ನಡೆವವಳ ಕಾಲ್ಗೆಜ್ಜೆ ಗಲುಕ
ಸದ್ಧಿನ್ನೂ ಕಿವಿಯಲಿ ಸ್ಥಭ್ಧ
ಕಬ್ಬು ಜಲ್ಲೆಯ ಸೀಳಿ ಸೀಳಿ
ಅಗೆದಗೆದು ರಸ ಹೀರಿದಾಗ
ನಾನೇ ಕಬ್ಬಂತಾಗೋ ಪುಳಕ
ಅವಳಿಗೂ ನೆನಪೆತ್ತರದ ಮಗ
ನಕ್ಕಾಗ ಅದೇ ಕೆನ್ನೆಗುಂಡಿ
ಕೆಲ ಚಿತ್ರಗಳೇ ಹಾಗೆ ಚೆನ್ನ ಚೌಕಟ್ಟಿನೊಳಗೆ!
ಶಂಕರ್ ನಾಗ್
ಮುಂಬೈ ರಕ್ಕಸ ತಂಗಡಿ

ಕುಡಿಕೆಯೊಳೇ ಮೊಳಕೆ
ಕುಡಿಕೆಯೊಳೇ ಸಂಗ್ರಹ
ಕಡೆಗೆ ಹಿಡಿ ಚಿತಾಭಸ್ಮ
ಯಾವುದಿದೆ ಆ ಧರ್ಮ
ಚಿರಂತನ ಭ್ರಮೆ ಕರ್ಮ
ಅಮೃತವೂ ಕಳ್ಳಭಟ್ಟಿ!
ಮುಕ್ಕಾಲು ಗೋಲಕೂ ಕವಿದ
ಕುಡಿಯಲಾರದ ಉಪ್ಪುಪ್ಪು ನೀರು
ತುಂಡು ನೆಲ ಕೂಪ ಮಂಡೂಕ
ನುಡಿ ಬೇಲಿ ಇನ್ನಿತರೇ ನಜ಼ರು
ಶಿಲ್ಪಿಗೂ ಮರೆಗುಳಿ ಸೃಷ್ಠಿ
ಅಲ್ಪ ಬುದ್ಧಿ ನೆರೆ ಮನೆ ತಂತ್ರ!
ಕಾಯಬಲ್ಲವೇ ಮುರಿದ ಲಾಠಿಗಳು
ಸರಣಿ ಸ್ಫೋಟ, ಬಂದೂಕು ಮೊರೆತ
ಗಗನ ಚುಂಬಿಗೂ ಉಕ್ಕು ಹಕ್ಕಿ ತಿವಿತ
ಅಹಾ! ಹರಾಜು ದೊಡ್ಡ ದೇಶಾಭಿಮಾನ
ಮಡ್ಡಿಗಳೇ, ಊದು ಊದಿಗೂ ಬರೀ ಮರಳೂ
ಫಳ ಫಳಿಸೋ ಗಾಜು ಫಲಕ...
29.11.08
ಉಯ್ಯಾಲೆ... ಜೋಕಾಲೆ...



ನೆಡು ತೋಪು ನಡು ಮರ
ನೆಲ ಮುಗಿಲ ಬೆಸೆದ ಬಂಧ
ಹಗ್ಗದುಯ್ಯಾಲೆ...
ಪಾಳು ಮನಸಿನ ಹಾಳು ಕೊಂಪೆ
ನಡು ಪಡಸಾಲೆ ಜಂತಿಗೆ
ತೂಗುಮಂಚ...
ಮಡಿಲ ಮೆತ್ತೆಯ ಮೇಲೆ
ಪವಡಿಸಲಿ ದೊಗ್ಗಾಲಿ ಕೃಷ್ಙ
ತಟ್ಟು ಕೈ ಲಯಕೆ ಜೋಂಪು
ಕೊರಳ ಜೋಗುಳ ನಾದ
ಮಡಿಲೇ ಕಂದನ ಮೊದಲ ಉಯ್ಯಾಲೆ
ಕೆತ್ತಿ ಮರ ಸಿಂಗರಿಸಿ
ಹಾಸಿ ಒಳಗೊಂದು ಮೆತ್ತೆ
ಹರಿದ ಸೀರೆಯಲೇ ಕಟ್ಟಿ
ಕೈ ಸೋಲುವರೆಗೂ ತೂಗಿದರೂ
ಮತ್ತದೇ ರಂಪ, ರಚ್ಚೆ ಅಳು
ಕಲಿಸಿ ಹಾಲನ್ನ ಉಣಿಸಲು
ತೊದಲುಲಿ ಕಂಕುಳ ಕೂಸ
ತಾಯಿ ಹುಡುಕುವುದದೇ ಜೋಕಾಲಿ
ಬೆತ್ತ, ತೇಗ, ಕಬ್ಬಿಣ ಹೀಗೆ
ಅವರ ಬಂಡವಾಳಕೆ ತಕ್ಕ ಉಯ್ಯಾಲೆ
ಉತ್ಸವ ಮೂರ್ತಿಗೆ ಬಂಗಾರದುಯ್ಯಾಲೆ
ಧಣಿಗೆ ಬಿಸಿಲಮಚ್ಚೆಯ ರಸಿಕ ಉಯ್ಯಾಲೆ
ಬಡವನಿಗೆ ತುಕ್ಕಿಡಿದ ಉಧ್ಯಾನದುಯ್ಯಾಲೆ
ಬೇಡದ ಮುದಿ ಜೀವ ಬಿದ್ದುಕೊಳ್ಳಲು
ನಡು ಮನೆ ಅರೆ ಕತ್ತಲ ತೂಗುಮಂಚ
ದೇವರದ್ದೋ? ದೆವ್ವದ್ದೋ? ತೂಗುವಾ ಕೈಯಿ?
ತೂಗು ತೂಗಿಗೂ ಅದು ಏರು ಮುಖಿ
ಜೀಕಿಗೂ ತಮ್ಮ, ನೆರೆಳು ಹಿಂಜೀಕು
’ನೈನಂ ಛಿಂಧ್ರಂತಿ ಶಸ್ತ್ರಾಣಿ’
ಮುಕ್ತಿಗಾಮಿನಿ ಜೋಕಿಲಿ ಬದುಕ ಸಂಕೇತ!
- ಬದರಿನಾಥ ಪಲವಳ್ಳಿ
ಬೆಂಗಳೂರು
7.9.08
ಸಂಧ್ಯಾ ರಾಗ...

ಹೊರಟು ನಿಂತಿರೇ ದೊರೆ...
ಇರುಳು ಕರಗಿತೇ ಇಷ್ಟು ಬೇಗ?
ಒಂದೂ ಮಾತಿರಲಿಲ್ಲ
ಬೆಸೆದ ಮನಗಳ ನಡುವೆ; ಹೆಪ್ಪುಗಟ್ಟಿತ್ತು ಮೌನ
ಮತ್ತೆ ಮೊದಲಂತಿರಲಿಲ್ಲೇಕೆ?
ಪ್ರೇಮ ಬಾಂದಳದಲ್ಲಿ ಪ್ರಣಯ ಹಕ್ಕಿ
ಸಾವಿರ ಬೇಸಿಗೆಗಳಲ್ಲಿ ತಂಪಾಗಿ ಇದ್ದೇನು
ನಿಮ್ಮಾಣೆ!
ಮಂಜಿಗಿಂತಲು ತಂಪು ನಿಮ್ಮ ನೆನಹು
ಹಾಸಿಟ್ಟ ಗರಿ ಗರಿ ಚಾದರಕ್ಕೇನು ಗೊತ್ತು
ಇನ್ನೆಷ್ಟು ಹೊತ್ತು ಈ ಬಿನ್ನಾಣ
ಮುಡಿದ ಮಲ್ಲಿಗೆಗೂ ಗೊತ್ತೆ ತನ್ನ ಅಂತ್ಯ?
ದೊರೆ!... ಮುಂಜಾವಿನ ಕಲರವದಷ್ಟೇ
ಗೋಧೂಳಿ ಸಮಯಕೂ ನನ್ನ ನಿಷ್ಠೆ
ಅದು ಎಂದೋ ಹಚ್ಚಿಟ್ಟ ನಂದಾದೀಪ
ಸಂತೃಪ್ತ ನನ್ನ ಕಣ್ಣಾಲಿಗಳಲ್ಲಿ,
ಚಕ್ರತೀರ್ಥ
ನಿಮಗೋ ಬರುವ ಮಾರ್ನವಮಿಗೆ ಪೂರಾ ಎಂಬತ್ತು
ಎಂಟು ಹೆತ್ತವಳು ನಾನು, ಅವಕ್ಕೆ ಮತ್ತೂ ಅವಕ್ಕೆ
ಎಣಿಸಿದರೆ ಹೋದ ಷಷ್ಠ್ಯಬ್ಧಿಗೆ ನೂರ ಹನ್ನೊಂದು
ಮತ್ತವೇ ಚಿತ್ರಗಳು,
ನಾನು ಹಾರ್ಮೊನಿಯಂ ಮುಂದೆ
ನೀವು ಅವರೇಕಾಳು ಉಪ್ಪಿಟ್ಟಿನ ಮುಂದೆ
ತುಟಿ ಅಂಚಲೆಂತದೋ ತುಂಟ ನಗೆ
ತಿಂಗಳೊಪ್ಪತ್ತನಲ್ಲಿ
ನನ್ನ ಮನೆಯಂಗಳದಿ ಚಪ್ಪರ!
(ಹಾಯ್ ಬೆಂಗಳೂರ್! ವಾರ ಪತ್ರಿಕೆಯ ಜೂನ್ ೧, ೨೦೦೧ ನೇ ಸಂಚಿಕೆಯಲ್ಲಿ ಪ್ರಕಟಿತ)
6.9.08
ಆಲಿಪ್ತ ನಿಮಿಷ

ನೀನು ಕದ್ದ ಹೃದಯವನೊಮ್ಮೆ
ಕಿವಿಗೊಟ್ಟು ಕೇಳು
ಅದರೊಳಗು ಮಿಡಿಯುತಿಹ ನಿನ್ಹೆಸರಕವನ ಸಂಕಲನವನೊಮ್ಮೆ
ಓದಿ ನೋಡು..
ಹತ್ತು ವರುಷಗಳಿಗೂ ಮಿಗಿಲು
ನಲ್ಲೆ ಈ ಪ್ರೇಮ ಸಿಂಧು
ದಕ್ಕಿದರಪಾವು ನಿಮಿಷಕೂ
ಹಬ್ಬಿ ಬದುಕೆಲ್ಲಾ ಗಂಧದಂತೆ
ಅರೆದುಕೊಂಡಿತೀ ಕವಿತೆ ಇಂತು...
ಗಳಿಗೆ ಎಲ್ಲೋ ಕಳೆದು ಅಂತರಂಗ
ಮರೆತು ನತೆಸುವ ನೆನಪ ಸಂಗ
ಅರಗಳಿಗೆ ಮರುಗುಳಿ ಅಂತರಾತ್ಮ
ನೆನೆಹುದೆಲ್ಲವು ಅಮೃತಮಯ
ನೂರು ಜನ್ಮದ ಬಂಧ..
- ಬದರಿನಾಥ ಪಲವಳ್ಳಿ
೨೭.೦೨.೨೦೦೮
ನಮ್ಮ ಕಾವಲಿಯೇ ತೂತು!

ನೇಣಿಗೆ ಬೀಳೋ
ಚಿತ್ರ ಪಟಕೂ ಗೋಡೆ ಒಂದಿರಬೇಕು
ಬಣ್ಣ ಮಾಸಲಿರಬೇಕು!
ಯಾರದೋ ಶುಕ್ರ ತಿವಿತಕೆ ಸಿಕ್ಕು
ಅಂಡಾಣು ಫಲಿಸಿದರೆ
ಪಿತೃ ಸುಖಃ ಅನುಭವಿಸಬೇಕು..
ಯಾವುದು ಹಾಲೋ? ಆಲ್ಕೋಹಾಲೋ?
ಇವರ ಶರಾಬಿನ ಬಟ್ಟಲಿಗೆ
ನಮ್ಮ ಬೆವರಿನ ಲೆಕ್ಕ ಜಮಾಬಂದಿ..
ಸುರಿವ ಮಳೆ ನೀರೆನಿತು ನದಿ ಕೊಳ್ಳ ಪಾಲು?
ಮತ್ತೆ ಭಾಷ್ಪಕೆ ಸಂದು ಮೋಡವಾಗಿ
ಮಳೆಗೆರೆವುದೆಲ್ಲಾ ಬರಿ ಕನಸ ಮಾತು!
ಗಿರಿ, ಶಿಖರ, ಬಾನು, ಕೆಂದಾವರೆ, ಹಾಲು ಹುಣ್ಣಿಮೆ
ಕವಿಗೆ ತಾನೇ ತೆವಲು ಪದ ಪದಗಳ ಸಾಲು!
ಬತ್ತಳಿಕೆಯೊಳಗೆ ನೂರ ಬಾಣಗಳಿರಲಿ
ಹೆದೆಗೇರಲಿ ಬೆಟ್ಟದೆತ್ತರದ ಬಿಲ್ಲು
ಮಂತ್ರ ಮರೆತರೆ ಮಿತ್ರ! ಅಲ್ಲೇನಿದೆ,
ರೇಷಿಮೆ ಬರಲು...
ಉತ್ತ ಬೀಜಗಳೆಲ್ಲ ಬೋಧಿ ವೃಕ್ಷಗಳಾದರೆ
ಹಾದಿ ಬೀದಿಗಳಲೂ ಉದ್ಭವ ಗೌತಮ ಬುದ್ಧರು!
೦೨.೦೯.೨೦೦೮
ಸಿಂಗ್ಪೂರ್ ಕಣ್ರಿ - ನಮ್ಮ ಬೆಂಗಳೂರು!


ಸೀಳಿಕೊಂಡು ಬ್ರಿಗೇಡ್ ರೋಡು,
ಹೆಜ್ಜೆಗೊಂದು ಪಬ್ಬು-ಬಾರು;
ಗಲ್ಲಿಗೊಂದು ಸೈಬರು...
ಒನ್ ವೇಗಳ ಕಾರಾಮತ್ತು;
ಮೇಲೆ ಫ್ಲೈ ಓವರ್ರು,
ಎಡಕ್ಕೆ ಪೇ-ಅಂಡ್-ಪಾರ್ಕು;
ಬಲಕ್ಕೆ ನಿರ್ಮಲ ಟಾಯ್ಲೆಟ್ಟು-
ಮೂತ್ರಕ್ಕೆ ಬರೀ ಎಂಟಾಣೆ!
ಸಿಗ್ನಲ್ಲಿಗೊಬ್ಬ ಕಿಸೆ ಕತ್ತರಿಸೋ ಟ್ರಾಫಿಕ್ಕು;
ಹೊತ್ತೊಯ್ಯಲಿಕ್ಕೆ ಟೈಗರ್ರು,
ಸದಾ ಸಿಂಗಲ್ ಫೇಸಿನ ಸುಪ್ರಭಾತಕ್ಕೆ
ಮಿಣುಕು ಮಿಣುಕು ಟ್ಯೂಬ್ಲೈಟು,
ಪ್ಲಾಸ್ಟಿಕ್ ಗೊಬ್ಬರ ತಿನ್ನೋ ಬೀದಿ ದನ;
ಹಳ್ಳಕ್ಕೊಂದು ಸಸಿ ನೆಡಿ; ಆಹಾ! ಎಂಥಾ ರೋಡು?
ಸರ್ಕಾರಿ ವಾಹನಗಳಿಗೆ
ಭರಪೂರ ಹೊಗೆ - ರಿಯಾಯತಿ;
ಆನಂದ್ರಾವ್ ಸರ್ಕಲ್ಲಿನಲ್ಲಿ-
ವಾಯುಮಾಲಿನ್ಯ ನಿಯಂತ್ರಣ ಅಳಿಯೋ ಗಾಡಿ!
ಅಬ್ಬಾ ಬೆಂಗ್ಳೂರೇ; ನೀನು ಸಿಂಗ್ಪೂರೇ!
- ಬದರಿನಾಥ ಪಲವಳ್ಳಿ
(ಹಾಯ್ ಬೆಂಗಳೂರ್! ವಾರ ಪತ್ರಿಕೆಯ ಮಾರ್ಚ್ ೧೫, ೨೦೦೨ ನೇ ಸಂಚಿಕೆಯಲ್ಲಿ ಪ್ರಕಟಿತ)
ಎರಡು ಚಿತ್ರಗಳು


ಚಿತ್ರ ಪಟ - ಒಂದು
ಯಾವುದೀ ಓಘ? ಹುಚ್ಚು ಆವೇಗ?
ಎತ್ತ ಸಾಗಿದೆ ಪ್ರಿಯೆ ಬೆಂಗಳೂರು....
ರಾಯರಾಳ್ವಿಕೆಯಲ್ಲಿ ರಾಶಿ ಲೆಕ್ಕದಲಿ
ವಜ್ರ ವೈಢೂರ್ಯ ರತ್ನಾದಿಗಳು..
ನನ್ನ ಕಾಲಕ್ಕೆ; ಕಳ್ಳೇ ಕಾಯಿ ಪರಿಷೆಯಲಿ
ಪ್ರಧ್ಯುಮ್ನ ಬಾಣಕ್ಕೆ ರತ್ನ ಪದ್ಮ ಮೀನಾಕ್ಷಿಯರು!
ರಸಿಕ ಮಣಿಗಳಿಗೆ ಕೆಂಪೇಗೌಡ ಹಿಮಾಲಯ
ಸಭ್ಯರಿಗೆ! ರಾಜ್ಕುಮಾರ ವಿಷ್ಣು ಅಂಬಿ ರಮೇಶ
ಇಷ್ಟ ದೇವತಾ ಕ್ಯಾಲಂಡರಿನ ಹಿಂದೆ
ಸಿಲ್ಕು ಡಿಸ್ಕೋ ಮುಲುಕಿಸೋ ಜನ್ಮಸ್ಥ ಉಡುಗೆ!
ಊರಗಲವಿದ್ದ ಮಸಾಲೆ ದೋಸೆ ಕಾಸಗಲ
ನಲ್ಲಿ ನೀರಿಗೂ ಬ್ರಾಂಡಿನ ಬಿರುಡೆ
ಸುರಿದ ಮಳೆ, ಒಂಥರಾ ಹೆಂಡತಿ ಉಪದೇಶ
ರಾಜ ಕಾಲುವೆಗಳೆಲ್ಲ ಒತ್ತುವರಿ ಈಗ!
ಸಿಗರೇಟು ರಮ್ಮು ಲಲನೆಯ ಕೂಡ; ಎಲ್ಲಿಂದಲೋ ಬಂದವರಿಗೆ
ಅಫೀಮು ಗಾಂಜ ಲೈವ್ ಬ್ಯಾಂಡುಗಳ ತೆವಲು
ನೂರನಲವತ್ತೇಳು ಹುತ್ತಗಳಲೂ ಪರಕೀಯ ಹಾವುಗಳು
ನಮ್ಮ ಬಸ್ಸಲ್ಲೇ ನಾವು ನಿಂತ ಪಯಣಿಗರು!....
ನಗರ ಭೂಪಟಕ್ಕೀಗ ಆನೆ ಕಾಲು ರೋಗ..
ನನ್ನ ಪ್ರಾರಬ್ಧ ಕರ್ಮಕ್ಕೆ,
ಪ್ರಿಯತಮೆ, ಗತ ತ್ರಿಪುರ ಸುಂದರಿ....
***
ಇನ್ನೊಂದು ಚಿತ್ರಪಟ
ಪ್ರೇಯಸಿಯೇ ಬದಲಾದ ಮೇಲೆ
ಕಾಲ ಚಕ್ರಕ್ಕೆ ಸಿಕ್ಕ ನನ್ನ ಹಳ್ಳಿ?
ತಿರು ತಿರುವಿ ಚಕ್ರ; ಮಣ್ಣ ಮುದ್ದೆಗೆ
ಕುಂಬಾರ ಜೀವ ತುಂಬುತಿದ್ದ
ನೇಗಿಲು ಕುಡುಗೋಲು ಗುದ್ದಲಿಗೆ
ಕಮ್ಮಾರ ತಿದಿ ಒತ್ತ ರೂಪ ಕೊಡುತಿದ್ದ..
ವಿಷ್ಣು ಪತ್ನಿ ಬಲು ಕರುಣಾಮಯಿ
ನಿತ್ಯ ಹರಿಧ್ವರ್ಣ ಕಾಡುಗಳು; ಕಾಲ ಕಾಲಕ್ಕೆ ಮಳೆ
ಬಾಳೆ ತೆಂಗು ರಾಗಿ ಜೋಳ ಇನ್ನಿತರೆ..
ಸಮೃದ್ಧ ಫಸಲಿಗೆ ರೈತಾಪಿ ಬೆವರು!
ಪಟ್ಟಣಕ್ಕೊರಟ ಬಸ್ಸುಗಳ ತುಂಬೆಲ್ಲ
ಹಳ್ಳಿ ಹೈಕಳದ್ದೇ ಗಂಟು ಮೂಟೆ..
ಊರಿಗೆ ಊರೇ ಗುಳೆ ಎದ್ದ ಮೇಲೆ
ಸಾವಿತ್ರಮ್ಮನ ಗದ್ದೆಗೆ ಆಳುಗಳ ಬರ!
ಯಾವುದೋ ಹುಚ್ಚು ಸೆಳೆತಕೆ ಸಿಕ್ಕು
ನೆಲದ ಬೆಲೆ ಅಂಬರಕ್ಕೇರಿ
ತುಂಡು ರೈತರಿಗೆಲ್ಲಾ ಕಾರು ಬಾರು
ಉಂಡದ್ದೆಲ್ಲಾ ಬಿರಿಯಾನಿ, ಕಬಾಬು!
ಯಾರು ಬೆಳೆಯುತ್ತಾರೆ ನಾಟಿ-ಗೀಟಿ ಮಾಡಿ ಎಲ್ಲಾ?
ಉಂಡು ಮಜಾ ಮಾಡಿದ ಮೇಲೆ; ಇದ್ದದ್ದೇ ಬಿಡಿ,
ಸರ್ಕಾರದ ಸಾಲ ಮನ್ನಾ!
- ಬದರಿನಾಥ ಪಲವಳ್ಳಿ
೦೬ ಸೆಪ್ಟೆಂಬರ್ ೨೦೦೮






